ಕಾರಾಚಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಹಾರ್ಡ್‍ವಿಕಿಯ ಬೆ ನೇಟ ಎಂಬ ಶಾಸ್ತ್ರೀಯ ನಾಮವುಳ್ಳ ಒಂದು ಮರ. ಲೆಗ್ಯೂಮಿನೋಸೀ ಕುಟುಂಬದ ಸಿಸಾಲ್‍ಪಿನಿಯೇಸೀ ಉಪಕುಟುಂಬಕ್ಕೆ ಸೇರಿದೆ. ಎಣ್ಣೆಮರ, ಕಮ್ರ ಇದರ ಪರ್ಯಾಯನಾಮಗಳು. ಇದು ಸಾಮಾನ್ಯವಾಗಿ ಮಧ್ಯ ಭಾರತ ಮತ್ತು ದಕ್ಷಿಣ ಭಾರತದ ಸವನ್ನಮಾದರಿಯ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮೈಸೂರು ರಾಜ್ಯದಲ್ಲಿ ಬೆಳಗಾಂವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಸಿಗುವುದು. ಇದರ ಬೆಳೆವಣಿಗೆಗೆ ಕಲ್ಲುಗಳಿಂದ ಕೂಡಿದ ಒಣ ನೆಲವಿದ್ದರೆ ಚೆನ್ನ. ಬೆಳೆವಣಿಗೆ ಬಲು ನಿಧಾನ. ವಂಶಾಭಿವೃದ್ಧಿ ಸಾಮಾನ್ಯವಾಗಿ ಬೇರು ಹೀರಕಗಳಿಂದ (ರೂಟ್ ಸಕರ್ಸ್); ಬೀಜಪ್ರಸರಣದಿಂದ ಬಹಳ ಕಡಿಮೆ. ಆದರೆ ಕೃತಕವಾಗಿ ಬಿತ್ತನೆಯಿಂದಲೂ ನಾಟಿ ಮಾಡುವುದರಿಂದಲೂ ಬೆಳೆಸಬಹುದು. ಮೊದಲ ವಿಧಾನ ಹೆಚ್ಚು ಜಯಪ್ರದವಾದುದು.

 ಈ ಮರ 100' ವರೆಗೂ ಬೆಳೆಯುವುದಾದರೂ ಇದರ ಸಾಮಾನ್ಯ ಎತ್ತರ 60' ಮಾತ್ರ. ಇದರ ಮುಖ್ಯ ಕಾಂಡ ನೀಳ. ತುದಿಯಲ್ಲಿ ಹೆಚ್ಚು ರೆಂಬೆಗಳಿವೆ. ಸಣ್ಣ ಗಿಡಗಳ ತೊಗಟೆ ನುಣುಪಾಗಿಯೂ ಬೆಳ್ಳಿಯಂತೆ ಬೆಳ್ಳಗೂ ಇದ್ದು ಮರಕ್ಕೆ ವಯಸ್ಸಾದಂತೆ ಒರಟಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕೊನೆಗೆ ಹೆಚ್ಚಾಗಿ ಸೀಳು ಬಿಟ್ಟು ತೆಳುವಾದ ಪದರಗಳಾಗಿ ಬಿದ್ದುಹೋಗುತ್ತದೆ. ಎಲೆಗಳು ಕಂಚುವಾಳ ಅಥವಾ ಬಿಳಿ ಮಂದಾರದ (ಬಾಹಿನಿಯ) ಎಲೆಯಂತೆ ಎರಡು ಕಿರು ಎಲೆಗಳಿಂದ ಕೂಡಿದ್ದರೂ ಎರಡೂ ಬಿಡಿಬಿಡಿಯಾಗಿ ಇರುತ್ತವೆ. ಎಲೆ ಒರಟು. ತೊಟ್ಟಿಲ್ಲ. ಹೂಗಳು ಚಿಕ್ಕವು; ಸಂಕೀರ್ಣ ಪುಷ್ಪಗುಚ್ಛದಲ್ಲಿ ಸಮಾವೇಶಗೊಂಡಿವೆ. ಪುಷ್ಪಗುಚ್ಛ ಎಲೆಗಳ ಕಂಕುಳಲ್ಲೊ ರೆಂಬೆಗಳ ತುದಿಯಲ್ಲೊ ಇರುತ್ತದೆ. ಪುಷ್ಪಪತ್ರಗಳು 5; ಬಿಡಿಬಿಡಿಯಾಗಿವೆ. ಹಳದಿ ಮಿಶ್ರಿತ ಹಸಿರು ಬಣ್ಣದವಾಗಿದ್ದು ದಳಗಳಂತೆ ಕಾಣುತ್ತವೆ. ಹೂ ದಳಗಳು ಇಲ್ಲ. ಕೇಸರಗಳ ಸಂಖ್ಯೆ 10 ಅಥವಾ 5. ಇವು ಚಿಕ್ಕವು. ಅಂಡಾಶಯ ಉಚ್ಚಸ್ಥಾನದ್ದು; ಒಳಗೆ 2 ಅಂಡಕಗಳಿವೆ. ಶಲಾಕಾಗ್ರ ಗಾತ್ರದಲ್ಲಿ ದೊಡ್ಡದು; ಅಣಬೆಯ ಮಾದರಿಯಲ್ಲಿದೆ.

 ಕಾರಾಚಿ ಹೂ ಬಿಡುವ ಕಾಲ ಡಿಸೆಂಬರ್-ಜನವರಿ ತಿಂಗಳು. ಏಪ್ರಿಲ್-ಮೇ ತಿಂಗಳಿನಲ್ಲಿ ಕಾಯಿಗಳು ಮಾಗುತ್ತವೆ. ಅವುಗಳ ಆಕಾರ ಚಪ್ಪಟೆ. ಉದ್ದ 2"-3". ಬೀಜ ಒಂದೇ ಒಂದು.

 ಈ ಮರ ಭಾರತದಲ್ಲಿ ಬೆಳೆಯುವ ಅತಿ ಭಾರವಾದ ಮತ್ತು ಗಟ್ಟಿಯಾದ ಮರಗಳಲ್ಲೊಂದು ಒಂದು ಘನ ಅಡಿಗೆ ಸುಮಾರು 80 ಪೌಂಡು ತೂಗುತ್ತದೆ. ಇದಕ್ಕೆ ಅಂಜನ್ ಎಂಬ ವಾಣಿಜ್ಯ ನಾಮವಿದೆ ಈ ಮರದ ಹಲಗೆಗಳ ಬಣ್ಣ ಕೆಂಪಿನಿಂದ ಕಪ್ಪಿನವರೆಗೆ ವ್ಯತ್ಯಾಸವಾಗುತ್ತದೆ. ಗಟ್ಟಿಮರವಾದುದರಿಂದ ಕೊಯ್ಯುವುದು ಬಹಳ ಕಷ್ಟ. ಆದರೆ ಲೇತಿನಿಂದ ಗುಂಡಾದ ಕೆತ್ತನೆ ಕೆಲಸಗಳನ್ನು ಮಾಡಬಹುದು. ಗಾಡಿಯ ಚಕ್ರಗಳು, ನೇಗಿಲು, ಕಂಬ ಮುಂತಾದುವುಗಳ ತಯಾರಿಕೆಯಲ್ಲಿ ಮತ್ತು ಎಣ್ಣೆ ಇಳಿಸುವ ಯಂತ್ರಗಳಲ್ಲಿ ಈ ಮರದ ಉಪಯೋಗ ಹೆಚ್ಚಾಗಿ ಉಂಟು. 5'ಗಿಂತ ಹೆಚ್ಚಾಗಿ ಸುತ್ತುವರಿಯುಳ್ಳ ಮರದಿಂದ ಒಂದು ಬಗೆಯ ಎಣ್ಣೆಯನ್ನು ಇಳಿಸಬಹುದು ಇದಕ್ಕಾಗಿ ನೆಲದಿಂದ 3' ಮೇಲೆ ಕಾಂಡಕ್ಕೆ ಒಂದು ರಂಧ್ರವನ್ನು ಮಾಡಬೇಕು. ಈ ರಂಧ್ರ ಮಧ್ಯದ ಬೆಂಡಿನ ವರೆಗೂ ಹೋಗಬೇಕು. ಒಂದು ಮರ ಸುಮಾರು 4-16 ಗ್ಯಾಲನುಗಳಷ್ಟು ಎಣ್ಣೆಯನ್ನು ಕೊಡುತ್ತದೆ. ಈ ಎಣ್ಣೆಯನ್ನು ಗಾನರೀಯ ಮುಂತಾದ ಮೇಹರೋಗಗಳಿಗೆ ಔಷಧಿಯಾಗಿ ಬಳಸುವುದುಂಟು. ಮರದ ತೊಗಟೆಯಿಂದ ಒಂದು ವಿಧವಾದ ನಾರನ್ನು ಸಹ ಪಡೆಯಬಹುದು. ಈ ನಾರನ್ನು ಹೆಚ್ಚಾಗಿ ಬಾವಿಯ ಹಗ್ಗ ಮತ್ತು ಇತರ ವ್ಯಾವಸಾಯಿಕ ಸಲಕರಣೆಗಳಾಗಿ ಉಪಯೋಗಿಸುತ್ತಾರೆ. ಕೆಲವೆಡೆಗಳಲ್ಲಿ ಕಾರಾಚಿಯ ಎಲೆಯನ್ನು ದನಗಳಿಗೆ ಆಹಾರವಾಗಿ ಉಪಯೋಗಿಸುವುದೂ ಉಂಟು.

 

(ಆರ್.ಆರ್.ಆರ್.)